ವಿಷುವದ್ಬಿಂದುಗಳು ಮತ್ತು ಅಯನಬಿಂದುಗಳು

	ಕ್ರಾಂತಿವೃತ್ತವೂ (ಸೂರ್ಯನ ವಾರ್ಷಿಕ ಕಕ್ಷೆ, ಎಕ್ಲಿಪ್ಟಿಕ್) ವಿಷುವದ್ವøತ್ತವೂ (ಇಕ್ವೇಟರ್) ಪರಸ್ಪರ ಛೇದಿಸುವ ಬಿಂದುಗಳು ವಿಷುವದ್ಬಿಂದುಗಳು (ಈಕ್ವಿನಾಕ್ಷಿಯಲ್ ಪಾಯಿಂಟ್ಸ್); ಕ್ರಾಂತಿವೃತ್ತದಲ್ಲಿ ಸೂರ್ಯನ ಉತ್ತರತಮ ಮತ್ತು ದಕ್ಷಿಣತಮ ಬಿಂದುಗಳು ಅಯನಬಿಂದುಗಳು (ಸಾಲ್‍ಸ್ಟಿಶಿಯಲ್ ಪಾಯಿಂಟ್ಸ್, (ನೋಡಿ- ಅಯನ-ಸಂಕ್ರಾಂತಿಗಳು)). ಕ್ರಾಂತಿವೃತ್ತದ ನೇರ ಪಶ್ಚಿಮ-ಪೂರ್ವ ದಿಶೆಯಲ್ಲಿ (ಸೂರ್ಯನ ವಾರ್ಷಿಕ ಪರಿಭ್ರಮಣೆಯ ದಿಶೆ ಇದು) ಸರಿಯುವಾಗ ವಿಷುವದ್ವøತ್ತವನ್ನು ದಕ್ಷಿಣದಿಂದ ಉತ್ತರಕ್ಕೆ ವಸಂತವಿಷುವದಲ್ಲಿಯೂ (ವರ್ನಲ್ ಈಕ್ವಿನಾಕ್ಸ್) ಉತ್ತರದಿಂದ ದಕ್ಷಿಣಕ್ಕೆ ಶರದ್ವಿಷುವದಲ್ಲಿಯೂ (ಆಟಮ್ನಲ್ ಈಕ್ವಿನಾಕ್ಯ್) ಅಡ್ಡಹಾಯುತ್ತೇವೆ. 

ಚಿತ್ರ-1

ಇವೆರಡೂ ದಿನಗಳಂದು (ಅನುಕ್ರಮವಾಗಿ ಮಾರ್ಚ್ 21/22 ಮತ್ತು ಸೆಪ್ಟೆಂಬರ್ 22/23) ಸೂರ್ಯ ಕರಾರುವಾಕ್ಕಾಗಿ ಪೂರ್ವಬಿಂದುವಿನಲ್ಲಿ ಮೂಡಿ ಪಶ್ಚಿಮಬಿಂದುವಿನಲ್ಲಿ ಕಂತುತ್ತದೆ. ಕ್ರಾಂತಿವೃತ್ತ ಸಂಚಾರಿ ಸೂರ್ಯ ಉತ್ತರತಮ ಬಿಂದುವನ್ನು ಜೂನ್ 21/22ರಂದೂ ದಕ್ಷಿಣತಮ ಬಿಂದುವನ್ನು ಡಿಸೆಂಬರ್ 21/22ರಂದೂ ತಲಪುತ್ತದೆ. ಇದರ ಅರ್ಥ: ಡಿಸೆಂಬರ್ 21/22ರಂದು ಸೂರ್ಯನ ಉತ್ತರಾಭಿಮುಖ ಸರಿತವೂ ಜೂನ್ 21/22ರಂದು ದಕ್ಷಿಣಾಭಿಮುಖ ಸರಿತವೂ ಆರಂಭವಾಗುತ್ತವೆ. ಮೊದಲಿನ ಘಟನೆಯನ್ನು ಉತ್ತರಾಯಣಾ ರಂಭವೆಂದೂ ಎರಡನೆಯದನ್ನು ದಕ್ಷಿಣಾಯನಾರಂಭವೆಂದೂ ಕರೆಯುತ್ತೇವೆ. ಈ ಅಯನ ಬಿಂದುಗಳಿಗೆ  ಕರ್ಕಾಯನ (ಸಮ್ಮರ್ ಸಾಲ್‍ಸ್ಟಿಸ್, ಜೂನ್ 21/22) ಮತ್ತು ಮಕರಾಯಣ (ವಿಂಟರ್ ಸಾಲ್‍ಸ್ಟಿಸ್, ಡಿಸೆಂಬರ್ 21/22) ಎಂದು ಹೆಸರು. ವಸಂತವಿಷುವದಂದು ದಿವಾರಾತ್ರಿಗಳು ಸಮ ಅವಧಿಯವು; ಮುಂದೆ ಹಗಲಿನ ಅವಧಿ ವೃದ್ಧಿಸುತ್ತ ಕರ್ಕಾಯನ ದಂದು ಗರಿಷ್ಠವಾಗುತ್ತದೆ; ಅನಂತರದ ದಿನಗಳಲ್ಲಿ ಇರುಳಿನ ಅವಧಿ ಕ್ಷೀಣಿಸುತ್ತ ವಸಂತವಿಷುವದಂದು ಎರಡೂ ಸಮ ಅವಧಿಯವಾಗುತ್ತವೆ.		
								*

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ